ಪಿಂಗಲ
(1.) ಛಂದಶಾಸ್ತ್ರಕ್ಕೆ ಸರಿಯಾದ ರೂಪ ಕೊಟ್ಟು ಪರಿಷ್ಕರಿಸಿದವ. ಛಂದಶಾಸ್ತ್ರ ಈತನಿಂದಲೇ ಹುಟ್ಟಿತೆಂದೂ ಛಂದಸೂತ್ರಗಳು ವೇದಾಂಗದ ಒಂದು ಭಾಗವೆಂದೂ ಹೇಳುತ್ತಾರೆ. ಇವನಿಗಿಂತ ಹಿಂದೆ ಕ್ರೌಷ್ಟಕಿ, ತಂಡಿ, ಯಾಸ್ಕ, ನೈತವ, ರಾತ, ಮಾಂಡವ್ಯ ಮೊದಲಾದ ಛಂದೋವಿವೇಚಕರಿದ್ದರು. ಲೌಕಿಕ ಛಂದಸ್ಸುಗಳ ಸ್ವರೂಪ ವಿವರಣೆ ಪಿಂಗಲನ ಛಂದಸ್ಸೂತ್ರದಲ್ಲಿ ಮೊದಲು ಕಾಣಸಿಗುತ್ತದೆ. ಪಿಂಗಲ ಸೂತ್ರಗಳನ್ನು ಮಾತ್ರ ಕೊಟ್ಟು ಅವನ್ನು ಎಂಟು ಅಧ್ಯಾಯಗಳಾಗಿ ವಿಭಾಗಿಸಿರುತ್ತಾನೆ. ಇವುಗಳಲ್ಲಿ ವೈದಿಕ ಛಂದಸ್ಸುಗಳನ್ನೇ ಅಲ್ಲದೆ ತನುಮಧ್ಯಾ (ಆರು ಆಕ್ಷರಗಳ ವೃತ್ತ) ಮೊದಲುಗೊಂಡು ಚಂಡವೃಷ್ಟಿಪ್ರತಾಪದ (ಇಪ್ಪತ್ತೇಳು ಅಕ್ಷರಗಳ ದಂಡಕ) ವರೆಗೂ ಕೆಲವು ಲೌಕಿಕ ವೃತ್ತ, ವೈತಾಲೀಯಾದಿ ಜಾತಿ ಇವನ್ನೂ ತಿಳಿಸಿದ್ದಾನೆ. ಪ್ರಯೋಗದಿಂದಲೇ ತಿಳಿಯಬೇಕಾದುದ್ದನ್ನು ಗಾಢ ಪ್ರಕರಣದಲ್ಲಿ ಪರಾಮರ್ಶಿಸಿದ್ದಾನೆ. ಪ್ರಾಕೃತ ಛಂದಸ್ಸಿನ ವಿಚಾರ ಇವನಲ್ಲಿಲ್ಲ. ಶ್ಲೋಕವನ್ನಳೆಯುವ ಮಾನ ಪದ್ಧತಿಯನ್ನು (ಮೂರು ಅಕ್ಷರಗಳಿಂದ ಕೂಡಿದ ಎಂಟು ಗಣಗಳ ಕ್ರಮ) ಪ್ರಾರಂಭಿಸಿದವ ಈತನೇ. ಸಂಸ್ಕøತ ಲೌಕಿಕ ಸಾಹಿತ್ಯದ ಅನುಷ್ಟುಪ್ ಮೊದಲಾದ ಇಪ್ಪತ್ತಾರು ವರ್ಣವೃತ್ತಗಳಲ್ಲಿ ಕೆಲವು ವೃತ್ತಗಳ ವಿವರಗಳನ್ನು ಪ್ರಪ್ರಥಮವಾಗಿ ವರ್ಣಿಸಿದ್ದಾನೆ. ಆದ್ದರಿಂದಲೇ ಈತನನ್ನು ಛಂದಶ್ಯಾಸ್ತ್ರದ ಜನಕ ಎನ್ನುವುದು. ವರ್ಣವೃತ್ತಗಳ ಕ್ರಮವನ್ನು ಅನುಸರಿಸಿದ ಆರ್ಯಾ, ವೈತಾಲೀಯ, ಮಾತ್ರಾಸಮಕ ಎಂಬ ಮೂರು ವೃತ್ತಗಳನ್ನೂ ಇಲ್ಲಿ ವರ್ಣಿಸಲಾಗಿದೆ. ಇಲ್ಲಿಯ ಗಣಗಳನ್ನೂ ಅಕ್ಷರ ಗಣಗಳ ಒಂದು ಭೇದ ಎಂದೇ ಕರೆದಿದ್ದಾನೆ. ಆರು ಅಕ್ಷರಗಳಿಗಿಂತ ಕಡಿಮೆ ಇರುವ ವೃತ್ತಗಳ ವಿವರಣೆಯನ್ನು ಕೊಟ್ಟಿಲ್ಲ. ಅನಂತರದ ಜಯದೇವ, ಭರತರು ಈ ವಿಷಯದಲ್ಲಿ ಇವನನ್ನೇ ಅನುಸರಿಸಿದ್ದಾರೆ. ಪಿಂಗಲ ತ್ರ್ಯಕ್ಷರೀ ಗಣಗಳಿಗೆ ಮ-ಯ-ರ-ಸ-ತ-ಜ-ಭ-ನ ಮತ್ತು ಲಘು ಗುರುಗಳಿಗೆ ಲ-ಗ ಎಂಬ ಸಂಜ್ಞೆಗಳನ್ನು ಕೊಟ್ಟು ಯತಿಸ್ಥಾನ ನಿರ್ದೇಶನಕ್ಕೆ ಸಮುದ್ರ, ಕಾಲು, ಶರಾದಿ ಸಂಜ್ಞೆಗಳನ್ನು ಉಪಯೋಗಿಸಿಕೊಂಡು ವೃತ್ತ ಲಕ್ಷಣಗಳನ್ನು ಸೂತ್ರೀಕರಿಸಿದ್ದಾನೆ. ಇದರಿಂದ ವೃತ್ತದ ಅಕ್ಷರ ಸಂಖ್ಯೆ ಲ-ಗ ಮತ್ತು ಯತಿ ಇವನ್ನು ಕ್ರಮಬದ್ಧವಾಗಿ ಅರಿಯಲು ಸಹಾಯಕವಾಗಿದೆ. 

ಪಿಂಗಲನ ಕಾಲ ನಿಷ್ಕಷ್ಟವಾಗಿಲ್ಲ. ಷಟ್‍ಪ್ರತ್ಯಯಗಳಲ್ಲಿ ನಾಲ್ಕನ್ನು ಮಾತ್ರ ವಿವರಿಸಿದ್ದಾನೆ. ಆದ್ದರಿಂದ ಸಂಸ್ಕøತದ ಅನುಷ್ಟುಪ್, ತ್ರಿಷ್ಟುಪ್ ಜಾತಿಯ ವೃತ್ತಗಳು ಸರಿಯಾದ ಆಕಾರವನ್ನು ತಾಳುವುದಕ್ಕೆ ಬಹಳ ಮುಂಚೆಯೇ ಈತ ಇದ್ದವನೆಂದು ಹೇಳಬಹುದು. ಮೀಮಾಂಸಾ ಸೂತ್ರದ ಭಾಷ್ಯಾಕಾರ ಶಬರಸ್ವಾಮಿ ಈತನನ್ನು ಹೆಸರಿಸಿರುವುದರಿಂದ ಈತ ಕ್ರಿ.ಪೂ. 1-2 ನೆಯ ಶತಮಾನಗಳಲ್ಲಿದ್ದಿರಬಹುದು.

(2) ದೇಹದ ಮೂರು ಮುಖ್ಯನಾಡಿ (ಇಡಾ, ಪಿಂಗಲಾ, ಸುಷುಮ್ನಾ) ಗಳಲ್ಲಿ ಒಂದು. ಈ ನಾಡಿಗಳು ಗುದಸ್ಥಾನದ ಮೇಲ್ಭಾಗದಿಂದ ಹೊರಟು ಹುಬ್ಬುಗಳ ನಡುವೆ ಬರುತ್ತವೆ. ನಮ್ಮ ದೇಹದಲ್ಲಿ ಪ್ರಾಣಮಾರ್ಗವನ್ನು ಆಶ್ರಯಿಸಿಕೊಂಡಿರುವ ಮುಖ್ಯ ನಾಡಿಗಳು ಇವು. ಈ ಮೂರು ಪ್ರಾಣಿಗಳ ಬೆನ್ನುಹುರಿಯಲ್ಲಿವೆ.

(3) ಮಿಥಿಲಾ ನಗರಿಯ ಅತ್ಯಂತ ಸುಂದರಿ ವೇಶ್ಯೆ ಪಿಂಗಲಾ. ಈಕೆ ನಿತ್ಯವೂ ತನ್ನ ಕುಲಾಚಾರದಂತೆ ಶೃಂಗರಿಸಿಕೊಂಡು ಬಾಗಿಲ ಬಳಿ ನಿಂತು ಅನುರೂಪನಾದ ಪುರುಷನೊಬ್ಬನೂ ತನ್ನ ಬಳಿಗೆ ಬಾರದಿದ್ದುದ್ದನ್ನು ಕಂಡು ಬೇಸತ್ತು ತನ್ನ ಹಿಂದಣ ಜನ್ಮದ ಪರಿತಾಪದಿಂದ ವೈರಾಗ್ಯ ಹೊಂದಿ ಜನ್ಮಜರಾಮರಣಶೂನ್ಯನಾದ ಪರಮಾತ್ಮನು ತನ್ನಲ್ಲೇ ಇರುವಾಗ ಹೀನ ಪುರುಷರನ್ನೇಕೆ ಹಾರೈಸಬೇಕೆಂದು ವೈರಾಗ್ಯ ಹೊಂದಿ ನಿಶ್ಚಿಂತೆಯಿಂದ ಮಲಗಿಕೊಳ್ಳುತ್ತಿದ್ದಳು. ಹೀಗೆ ಕ್ರಮವಾಗಿ ಪರಮಾತ್ಮ ಸ್ವರೂಪವನ್ನರಿತು ಧನ್ಯಳಾದಳು.										    (ಎಸ್.ಆರ್.ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ